ಆಕಾಶ ಮಲ್ಲಿಗೆ -
ಬಿಗ್ನೋನಿಯೇಸಿ ಕುಟುಂಬಕ್ಕೆ ಸೇರಿದ ಮೆಲಿಂಗ್‍ಟೋನಿಯ ಹಾರ್ಟೆಂಸಿಸ್ ಎಂಬ ಈ ಗಿಡಕ್ಕೆ ಬಿರಟೆಯ ಮರ ಎಂಬ ಹೆಸರಿದೆ. ಇದು ಉದ್ದನೆಯ ಹರವಿನ ಎತ್ತರವಾದ (80') ತೊಗಟೆ ಹಳದಿ ಮಿಶ್ರ ಬೂದು ಬಣ್ಣ. ಬೆಂಡು. ಬರ್ಮ ಮೂಲಸ್ಥಾನ. ಭಾರತದಲ್ಲಿ ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿಯೂ ಸಾಲುಮರವಾಗಿಯೂ ಸಾಗುವಳಿ ಮಾಡುತ್ತಾರೆ. ಗಿಡ ಬೇಗ ಬೆಳೆಯುತ್ತದೆ. ತೇವಮಯ ಹಾಗೂ ಬಂಜರು ಪ್ರದೇಶಗಳಲ್ಲೂ ಬೆಳೆಯಬಲ್ಲುದು. ಬೇರು ಹೆಚ್ಚು ಆಳವಾಗಿ ಇಳಿಯುವದಿಲ್ಲ. ಬೇರು ಸಸಿಗಳು ಹೇರಳ. ಪಾತಿಯಲ್ಲಿ ಬೆಳೆದ ಸಸಿಯನ್ನು ನಾಟಿ ಮಾಡಿ ಬೆಳೆಸಬೇಕು. ಬೀಜಗಳಿಂದಲೂ ಮೊಸುಗಳಿಂದಲೂ ಬೆಳೆಸಬಹುದು. ಹೂಗಳು ಹೇರಳವಾಗಿದ್ದು ಬೆಳ್ಳಗೆ ಗಮಗಮಿಸುತ್ತಿರುತ್ತವೆ. ಕಾಯಿ 1.5' ಉದ್ದವಿದ್ದು ಎರಡೂ ತುದಿಯಲ್ಲಿ ಮೊನಚಾಗಿರುತ್ತವೆ. ಬೀಜ ಚಪ್ಪಟೆ.

ಚೌಬೀನೆ ಮೃದುವಾಗಿ ಹಳದಿ ಮಿಶ್ರಿತ ಬಿಳುಪು ಬಣ್ಣದಿಂದ ಕೂಡಿದ್ದು, ಟೀ ಪೆಟ್ಟಿಗೆ ಮೇಜು ಕುರ್ಚಿ ಇತ್ಯಾದಿಗಳಿಗೆ ಉಪಯುಕ್ತವಾಗಿದೆ. ತೊಗಟೆಯಿಂದ ಬಿರಟೆ ತಯಾರಾಗುತ್ತದೆ.	   			
 (ಎಂ.ಎಚ್.ಎಂ.; ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ